ಪೈಯೊನಿಯರ್

 	ಉತ್ತರ ಭಾರತದ ಅತ್ಯಂತ ಹಳೆಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಒಂದು. ಲಖನೌದಿಂದ ಪ್ರಕಟವಾಗುತ್ತಿದೆ.

	ಪೈಯೊನಿಯರ್ ಪ್ರಕಟಣೆ ಆರಂಭಿಸಿದ್ದು ಅಲಹಾಬಾದಿನಲ್ಲಿ 1865ರ ಜನವರಿ 1ರಂದು ಜಾರ್ಜ್ ಆಲೆನ್ ವ್ಯವಸ್ಥಾಪಕ ಹಾಗೂ ಸಂಪಾದಕ. ಆದರೆ ಸಂಪಾದಕೀಯ ವಿಭಾಗದ ಹೊಣೆಗಾರಿಕೆಯನ್ನು ಹೊತ್ತವನು ಪಾದ್ರಿ ರೆವರೆಂಡ್ ಜೂಲಿಯನ್ ರಾಬಿನ್‍ಸನ್. ಪತ್ರಿಕೆ ಭಾರತವನ್ನಾಳುತ್ತಿದ್ದ ಬ್ರಿಟಿಷ್ ಸರ್ಕಾರದ ಮುಖವಾಣಿ ಎಂದು ಹೆಸರು ಪಡೆಯಿತು. ಸರ್ಕಾರವನ್ನು ಟೀಕಿಸುತ್ತಿದ್ದ ಭಾರತೀಯರ ಪತ್ರಿಕೆಗಳನ್ನು ಪ್ರತಿರೋಧಿಸುವ ಉದ್ದೇಶದಿಂದಲೇ ಅದನ್ನು ಸ್ಥಾಪಿಸಲಾಯಿತು. ಅದನ್ನು ಅಲಹಾಬಾದಿನ ದೊಡ್ಡ ಫಿರಂಗಿ ಎಂದು ಕರೆಯುತ್ತಿದ್ದರು. ಬ್ರಿಟಿಷ್ ಸಮುದಾಯದ ಹಿತಾಸಕ್ತಿಗಳ ರಕ್ಷಣೆ ಆದರ ಮುಖ್ಯ ಗುರಿಯಾಗಿತ್ತು. ಆದರೆ, ಖಚಿತವಾದ ಸುದ್ದಿಗೂ ಅದು ಹೆಸರಾಗಿತ್ತು.

	ಹೆಸರಾಂತ ಇಂಗ್ಲಿಷ್ ಕವಿ ರುಡ್‍ಯಾರ್ಡ್ ಕಿಪ್ಲಿಂಗ್ 1887ರಲ್ಲಿ ಪೈಯೊನಿಯರ್ ಪತ್ರಿಕೆಯ ಸಹಾಯಕ ಸಂಪಾದಕನಾಗಿ ನೇಮಕಗೊಂಡ. ಒಂದು ವರ್ಷದ ಅನಂತರ ಅವನನ್ನು ವಿಶೇಷ ಬಾತ್ಮೀದಾರನನ್ನಾಗಿ ವಿಶ್ವ ಪರ್ಯಟನ ಮಾಡಲು ಕಳುಹಿಸಲಾಯಿತು. ಕಿಪ್ಲಿಂಗ್ ಏಳು ವರ್ಷಗಳ ಕಾಲ ಪ್ರಪಂಚವನ್ನು ಸುತ್ತಿದ. ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಜಪಾನ್ ಬಗ್ಗೆ ಅವನು ಬರೆದ ಲೇಖನಗಳನ್ನು ಪೈಯೊನಿಯರ್ ಪ್ರಕಟಿಸಿತು. ಈ ಲೇಖನಗಳಿಗಾಗಿ ಅಮೆರಿಕನ್ನನೊಬ್ಬ ಪತ್ರಿಕೆಯ ಹಳೆಯ ಪ್ರತಿಗಳನ್ನು 1500 ಪೌಂಡುಗಳಿಗೆ ಕೊಂಡನೆಂದು ಹೇಳಲಾಗಿದೆ. ಪೈಯೊನಿಯರ್‍ಗೆ ಬರುವ ಮುನ್ನ ಕಿಪ್ಲಿಂಗ್ ಲಾಹೋರಿನ ಸಿವಿಲ್ ಆಂಡ್ ಮಿಲಿಟರಿ ಗೆಜೆಟ್ ಪತ್ರಿಕೆಯಲ್ಲಿ ಸಂಪಾದಕ ಸ್ಟೀಫನ್ ಹ್ವೀಲರನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಕಿಪ್ಲಿಂಗ್ ಸಾಹಿತಿಯಾಗಿ ಕವಿಯಾಗಿ ಪ್ರಾಮುಖ್ಯ ಪಡೆದದ್ದು ಪೈಯೊನಿಯರ್‍ನಲ್ಲಿ ಇದ್ದಾಗಲೇ. 

	ಪೈಯೊನಿಯರ್ ಪತ್ರಿಕೆಯ ಅಭ್ಯುದಯಕ್ಕೆ ಶ್ರಮಿಸಿದ ಸಂಪಾದಕರು ಮೇಟ್ ಲ್ಯಾಂಡ್ ಪಾರ್ಕ್, ಜಾರ್ಜ್ ಜೆಸ್ನಿ, ಕ್ಲೈವ್ ರಾಟಿಂಗಾನ್, ಜಾನ್ ವುಡ್‍ಕಟ್, ಎಡ್ವಿನ್ ಹೊವಾರ್ಡ್ ಮತ್ತು ಫ್ರೆಡ್‍ವಿಲ್ಸನ್. ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದ ವಿನ್‍ಸ್ಟನ್ ಚರ್ಚಿಲ್ ಪೈಯೊನಿಯರ್ ಪತ್ರಿಕೆಗೆ 1890ರಲ್ಲಿ ನಡೆದ ಟೈರಟ್ ಕದನದ ಸಮಯದಲ್ಲಿ ವಿಶೇಷ ಯುದ್ಧ ಬಾತ್ಮೀದಾರನಾಗಿದ್ದರು.

	ಇತರ ಪತ್ರಿಕೆಗಳಿಗಿಂತ ಮುಂಚೆಯೇ ಪೈಯೊನಿಯರ್ ಸರ್ಕಾರಿ ಸುದ್ದಿಗಳನ್ನು ಪ್ರಕಟಿಸಿ ಸದಾ ಸ್ಪರ್ಧೆಯ ಮುಂಚೂಣಿಯಲ್ಲಿ ಇರುತ್ತಿತ್ತು. ಆಗ ರಾಜಧಾನಿಯಾಗಿದ್ದ ಕಲ್ಕತ್ತದಲ್ಲಿದ್ದ ವಿಶೇಷ ಬಾತ್ಮೀದಾರ ಹೊವಾರ್ಡ್ ಹೆನ್ಸ್‍ಮನ್ ಇದಕ್ಕೆ ಕಾರಣ. ಚತುರ ಹಾಗೂ ದಕ್ಷ ಹೆನ್ಸ್‍ಮನ್ ಉನ್ನತ ಸರ್ಕಾರಿ ವಲಯದಲ್ಲಿ ತನ್ನ ಪ್ರಭಾವ ಬೆಳೆಸಿಕೊಂಡಿದ್ದ. ಆದ್ದರಿಂದ ಅವನಿಗೆ ಸರ್ಕಾರಿ ಸುದ್ದಿಯ ನೀಡುವಿಕೆಯಲ್ಲಿ ವಿಶೇಷ ಒಲವು ತೋರಿಸಲಾಗುತ್ತಿತ್ತು.

	ದೇಶದ ರಾಜಧಾನಿಯನ್ನು ಕಲ್ಕತ್ತದಿಂದ ನವದೆಹಲಿಗೆ ಬದಲಾಯಿಸುವ ಬಗ್ಗೆ ಪೈಯೊನಿಯರ್ ಸಂಪಾದಕೀಯವೊಂದನ್ನು ಬರೆದು ಅದನ್ನು ಬೆಂಬಲಿಸಿತು. ಸ್ವಲ್ಪ ದಿವಸಗಳಲ್ಲೇ ಸರ್ಕಾರ ಈ ತೀರ್ಮಾನ ಕೈಗೊಂಡಾಗ ಅದು ಪೈಯೊನಿಯರ್ ಪತ್ರಿಕೆಗೆ ಈ ಬಗ್ಗೆ ಮೊದಲೇ ಸುಳಿವು ನೀಡಿತ್ತು ಎಂದು ಅನೇಕರು ಸಂಶಯಪಟ್ಟರು. ಅನಂತರ ನಡೆದ ಸರ್ಕಾರಿ ತನಿಖೆಯಿಂದ ಅದು ಕೇವಲ ಕಾಕತಾಳೀಯ ಎಂಬುದು ಸ್ಥಿರಪಟ್ಟಿತು. 

ಸ್ವಲ್ಪ ಕಾಲದ ನಂತರ ಪತ್ರಿಕೆಯ ಮಾಲಿಕತ್ವ ಭಾರತೀಯರ ವಶಕ್ಕೆ ಬಂತು. ಆದರೆ, ಪತ್ರಿಕೆಯ ಪ್ರಸಾರ ಇಳಿಮುಖವಾಯಿತು. ಆಗ ಆಡಳಿತ ವರ್ಗ ಪ್ರಸಿದ್ಧ ಪತ್ರಕರ್ತ ಡೆಸ್ಮಾಂಡ್ ಯಂಗರನ್ನು ಸಂಪಾದಕರಾಗಲು ಆಹ್ವಾನಿಸಿತು. ಪ್ರಸಾರವನ್ನು ಹೆಚ್ಚಿಸಲು ಯಂಗ್ ಪತ್ರಿಕೆಯನ್ನು ಲಖನೌಗೆ ವರ್ಗಾಯಿಸಿದರು. ಆದರೆ, ಒಂದು ದಿನವೂ ಪ್ರಕಟಣೆ ನಿಲ್ಲದಂತೆ ಚಾಕಚಕ್ಯದಿಂದ ಈ ವರ್ಗಾವಣೆಯಾಯಿತು. ಪತ್ರಿಕೆಯ ಪ್ರಸಾರ ಸ್ವಲ್ಪ ಏರತೊಡಗಿತು. ಯಂಗರ ಅನಂತರ ಪ್ರಸಾರ ಮತ್ತೆ ಕ್ಷೀಣಿಸಿತು. ಎಸ್.ಎನ್. ಘೋಷ್ ತಮ್ಮ ಸಂಪಾದಕತ್ವದಲ್ಲಿ ಪತ್ರಿಕೆಯ ಸುಧಾರಣೆಗೆ ಮಹತ್ವ ನೀಡಿದರು. ಪೈಯೊನಿಯರ್ 1965ರಲ್ಲಿ ಶತಮಾನೋತ್ಸವ ಆಚರಿಸಿತು. ಈಗ ಪ್ರಸಿದ್ಧ ಪತ್ರಕರ್ತ ಚಂದನ್‍ಮಿತ್ರ ಇದರ ಸಂಪಾದಕರು ಹಾಗೂ ಪತ್ರಿಕೆಯ ಸ್ವಾಮ್ಯ ಪಡೆದಿರುವವರು ಸಿ ಎಂ ವೈ ಕೆ ಪ್ರಿಂಟೆಡ್ ಲಿ., ನ ಮ್ಯಾನೇಜಿಂಗ್ ಡೈರೆಕ್ಟರ್.
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ